ಊಸರವಳ್ಳಿ

	ಉರಗವರ್ಗದ ಸ್ಕ್ವಮಾಟ ಗಣದ ಕೆಮಿಲಿಯಾನ್ಟಿಡೆ ಕುಟುಂಬದ ಒಂದು ಬಗೆಯ ಹಲ್ಲಿ. ಭಾರತದಲ್ಲಿ ಕೆಮಿಲಿಯಾನ್ ಝೈóಲಾನಿಕಸ್ ಎಂಬ ಒಂದು ಪ್ರಭೇದ ಮಾತ್ರ ಕಂಡುಬರುತ್ತದೆ. ಇದರ ರೂಢಿನಾಮ ಗೋಸುಂಬೆ. ಇವು ಪರಿಸರಕ್ಕೆ ಅನುಗುಣವಾಗಿ ಹೊಂದಿಕೊಂಡು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಆಫ್ರಿಕ, ಮೆಡಗಾಸ್ಕರ್, ಅರೇಬಿಯ, ಭಾರತದ ಗಂಗಾ ನದಿಯ ದಕ್ಷಿಣ ಹಾಗೂ ಪಶ್ಚಿಮಕ್ಕೆ ಹಬ್ಬಿದ ಇವುಗಳ ಆವಾಸ, ಪಶ್ಚಿಮದಲ್ಲಿ ಪಾಕಿಸ್ತಾನದ ಪೇಶಾವರದವರೆಗೂ ಹಬ್ಬಿದೆ. ದಕ್ಷಿಣ ಭಾರತದಾದ್ಯಂತ ಮತ್ತು ಸಿಲೋನಿನಲ್ಲಿ ಸಹ ಇವನ್ನು ಕಾಣಬಹುದು. ಊಸರವಳ್ಳಿಯ ಪ್ರತಿ ಕಾಲಿನ ಎರಡನೆಯ ಮತ್ತು ಮೂರನೆಯ ಬೆರಳುಗಳು ಕೂಡಿ ಸಂಯುಕ್ತಾಂಗುಲಿಯಾಗಿದೆ. ಇಂತಹ ಸಂಯುಕ್ತ ರಚನೆ ಎದುರು ಬದರಿನ ರಚನೆ ಹೊಂದಿದ್ದು, ಕೊಂಬೆರೆಂಬೆಗಳನ್ನು ಭದ್ರವಾಗಿ ಹಿಡಿದು ಜಿಗಿಯಲು ಉಪಯುಕ್ತವಾಗಿದೆ. ಬಾಲ ಸುರುಳಿಯ ಹಾಗೆ ಸುತ್ತಿಕೊಂಡು ಬಲವಾಗಿ ಹಿಡಿದುಕೊಳ್ಳಬಲ್ಲ ಗ್ರಹಣಾಂಗ. ಇವೆಲ್ಲವೂ ಊಸರವಳ್ಳಿಯನ್ನು ಮರಗಳ ಮೇಲೆ ಜೀವಿಸಲು ಸೂಕ್ತ ಜೀವಿಯನ್ನಾಗಿಸಿದೆ. 
ಗುಂಡಗೆ ಮತ್ತು ಸ್ವತಂತ್ರವಾಗಿ ಚಲಿಸುವ ಒಂದು ಜೊತೆ ಹೊರಚಾಚಿದ ಕಣ್ಣುಗಳಿವೆ. ಕಣ್ಣನ್ನು ರಕ್ಷಿಸಲು ನಿಕ್ಟಿಟೇಟಿಂಗ್ ಪೊರೆ ಎಂಬ ತೆಳು ಪೊರೆ ಇದೆ. ನಾಲಿಗೆಯ ತುದಿಯಲ್ಲಿ ಅಂಟುದ್ರವ ಸ್ರವಿಸುವ ಉಬ್ಬಿದ ಭಾಗವಿದೆ. ನಾಲಿಗೆಯನ್ನು ಕ್ಷಣಾರ್ಧದಲ್ಲಿ ಹೊರಚಾಚಿ ಆಹಾರವನ್ನು ಬೇಟೆಯಾಡಬಲ್ಲದು. ಇದರ ನಾಲಿಗೆಯ ಉದ್ದ 30 ಸೆಂಟಿಮೀಟರ್‍ವರೆಗೆ ಬೆಳೆದ ದಾಖಲೆ ಇದೆ.

	ಊಸರವಳ್ಳಿ ಅಥವಾ ಗೋಸುಂಬೆಯ ಬಣ್ಣ ಬದಲಾವಣೆ ಗಾದೆಮಾತು. ಆದರೆ ಇದು ಅತಿಶಯೋಕ್ತಿ ಮಾತ್ರ. ಈ ಬಣ್ಣ ಬದಲಾಯಿಸುವ ಕ್ರಿಯೆ ಹಲ್ಲಿಯ ಜಾತಿಯಲ್ಲಿ ಸುತ್ತಲಿನ ಪರಿಸರ ಪ್ರಭಾವದಿಂದ ಉಂಟಾಗುತ್ತದೆ. ಊಸರವಳ್ಳಿಯಲ್ಲಿ ಈ ಕ್ರಿಯೆ ಕೆಲಮಟ್ಟಿಗೆ ಅದರ ಕಣ್ಣುಗಳ ಹಿಡಿತದಲ್ಲಿದೆ. ಬೆಳಕು, ಶಾಖ ಮತ್ತು ಶರೀರಕ್ರಿಯೆ ಈ ವರ್ಣವ್ಯತ್ಯಾಸಕ್ಕೆ ಮುಖ್ಯಕಾರಣಗಳು. ಈ ಪ್ರಾಣಿಯ ಮೂಲವರ್ಣ ಕಂದು ಅಥವಾ ಹಸಿರುಬಣ್ಣ, ಇದರ ಮಧ್ಯೆ ಅಲ್ಲಲ್ಲಿ ಕಪ್ಪು ಚುಕ್ಕೆಗಳೂ ಅಕ್ಕಪಕ್ಕಗಳಲ್ಲಿ ನಸುಕಂದು ಬಣ್ಣದ ಮಚ್ಚೆಗಳೂ ಇವೆ. ಕತ್ತಲೆಯಲ್ಲಿ ಇದರ ಬಣ್ಣ ಬಿಳುಪು ಮತ್ತು ಹಳದಿಯ ಮಚ್ಚೆಗಳಿಂದ ಕೂಡಿದಂತೆ ಕಾಣುವುದು. ಬಿಸಿಲಿನಲ್ಲಿ ನಸು ಕಪ್ಪುಬಣ್ಣದಿಂದ ಕೂಡಿರುವಂತೆ ತೋರುವುದು. ಹೆಚ್ಚು ಶಾಖವಿದ್ದಾಗ ಹಸಿರಾಗಿ ಕಂಡರೆ ಕಡಿಮೆ ಶಾಖವಿರುವಾಗ ತೆಳು ಕಂದುಬಣ್ಣದಿಂದಲೂ ಹಳದಿ ಚುಕ್ಕೆಗಳಿಂದಲೂ ಕೂಡಿರುವುದು. ಉದ್ವೇಗಗೊಂಡಾಗ ತೆಳುವಾದ ಬಣ್ಣವಿರುವ ಭಾಗಗಳು ಕಪ್ಪುಬಣ್ಣಕ್ಕೆ ತಿರುಗುವುವು. 

ಊಸರವಳ್ಳಿ ಅಂಡಜ. ನೆಲದಲ್ಲಿ ಗುಳಿತೋಡಿ ಮೊಟ್ಟೆ ಇಡುವ ಇವು ಒಮ್ಮೆಗೆ ಸುಮಾರು 22 ರಿಂದ 33 ಮೊಟ್ಟೆ ಇಡುತ್ತದೆ. ಸುಮಾರು 9 ತಿಂಗಳ ನಂತರ ಮರಿಗಳು ಹೊರಬರುತ್ತದೆ. ದಕ್ಷಿಣ ಆಫ್ರಿಕದ ಕೆಲವು ಜಾತಿಯವು ಮೊಟ್ಟೆಗಳನ್ನು ತಮ್ಮ ಶರೀರದಲ್ಲೇ ಇಟ್ಟುಕೊಂಡು ಅವು ಒಡೆದ ಮೇಲೆ ಮರಿಗಳನ್ನು ಈಯುತ್ತವೆ.

	ಊಸರವಳ್ಳಿಯ ತಲೆಯ ಮೇಲ್ಭಾಗದಲ್ಲಿ ಮುಳ್ಳಿನಂಥ ರಚನೆಗಳಿವೆ. ಇವು ಕೆಲವಲ್ಲಿ ದೊಡ್ಡದಾಗಿ ಬೆಳೆದು ಕೋಡುಗಳಂತೆ ಕಾಣಿಸಿಕೊಳ್ಳುವುವು. ಇವುಗಳ ಸಂಖ್ಯೆ ಒಂದೊಂದು ಜಾತಿಯಲ್ಲಿಯೂ ಬೇರೆ ಬೇರೆಯಾಗಿರುತ್ತದೆ.
(ಬಿ.ಎನ್.ಎ.) 

ಪರಿಷ್ಕರಣೆ: ಕೆ.ಎಸ್. ನವೀನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ